ಮಂಗಳೂರು: ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದಿಂದ ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಪೋಟದಲ್ಲಿ ಮೃತಪಟ್ಟವರಿಗೆ ಮಂಗಳವಾರ ನಗರದ ಮಿಲಾಗ್ರಿಸ್ ದೇವಾಲಯದ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜೊರ್ ಮ್ಯಾಕ್ಸಿಂ ನೊರೊನ್ಹಾ ಬಾಂಬ್ ಸ್ಫೋಟದಲ್ಲಿ ಮಡಿದ ಜನರ ಆತ್ಮಗಳಿಗೆ ಶಾಂತಿ ಕೋರಿ ಗಾಯಾಳುಗಳಿಗೆ ಸಾಂತ್ವಾನ ಹೇಳಿದರು. ಬಾಂಬ್ ಸ್ಫೋಟದಲ್ಲಿ ಮಡಿದ ಜನರು ಸತ್ತರೂ ದೇವರಲ್ಲಿ ಜೀಸುತ್ತಾರೆ. ಯೇಸು ಸ್ವಾಮಿಯ ಪುನರುತ್ಥಾನದ ಹಬ್ಬ. ಯೇಸು ಮರಣದ ಮೇಲೆ ಜಯ ಸಾಧಿಸಿದ ಹಬ್ಬ. ಈ ಹಬ್ಬದ ಆಚರಣೆ ಮಾಡಲು ಬಂದ ಜನರು ಯೇಸು ಸ್ವಾಮಿಯಲ್ಲಿ ನಂಬಿಕೆಯುಳ್ಳ ಭಕ್ತಾಧಿಗಳು. ಆದ್ದರಿಂದ ಅವರ ನಂಬಿಕೆಯಿಂದ ದೇವರಲ್ಲಿ ಜೀವಿಸುತ್ತಾರೆ ಎಂಬ ವಿಶ್ವಾಸದ ಮಾತುಗಳನ್ನು ನುಡಿದರು. ಪ್ರಾರ್ಥನಾ ಕೂಟದಲ್ಲಿ ಸೇರಿದ ಜನರೆಲ್ಲರೂ ತಮ್ಮ ಕೈಯಲ್ಲಿ ಬೆಳಗುವ ಮೊಂಬತ್ತಿಯನ್ನು ಹಿಡಿದು ಎರಡು ನಿಮಿಷ ಮೌನವಾಗಿ ನಿಂತು ಮಡಿದ ಜನರಿಗಾಗಿ ಸಂತಾಪ ವ್ಯಕ್ತ ಪಡಿಸಿದರು. ಫಾ.ಜೆ.ಬಿ. ಕ್ರಾಸ್ತ ಮಡಿದವರಿಗಾಗಿ ಮತ್ತು ಗಾಯಾಳುಗಳಿಗಾಗಿ ಪ್ರಾರ್ಥನೆ ಸಲ್ಲಿಸಿದರು.