Author: Team Kudla City

ತರಕಾರಿ ಕೆಡದಂತೆ ಕೋಟಿಂಗ್ ಪ್ಲ್ಯಾನ್ !

ತರಕಾರಿಯೊಂದನ್ನು ನಾಲ್ಕೈದು ದಿನಕ್ಕಿಂತ ಹೆಚ್ಚು ಕಾಲ ಕೆಡದಂತೆ ಸಂರಕ್ಷಿಸುವುದು ಕಷ್ಟ ಆದರೆ ಪುತ್ತೂರಿನ 15 ರ ಹರೆಯದ ಅಮೋಘ ನಾರಾಯಣ ವೆಜಿಟೇಬಲ್ ಕೋಟಿಂಗ್‌ಗೆ ನೈಸರ್ಗಿಕ ವಿಧಾನದ ಯಶಸ್ವಿ ಪ್ರಯೋಗ ಮಾಡಿದ್ದು, ಅದಕ್ಕೀಗ ಪೇಟೆಂಟ್ ಪಡೆಯಲು ನಿರ್ಧರಿಸಿದ್ದಾರೆ. ಮೂಡುಬಿದಿರೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.

ಅಮೋಘ ಬದನೆ ಕಾಯಿಗೆ ಬೀಂಪುಳಿ ಎಂಬ ಮರದ ಎಲೆಯನ್ನು (ಬಿಲಿಂಬಿ ಲೀವ್ಸ್) ಬಳಸಿಕೊಂಡು ಅದರ ನಿರ್ದಿಷ್ಟ ಅಂಶವನ್ನು ಪಡೆದುಕೊಂಡು ತಯಾರಿಸಿದ ದ್ರಾವಣದಲ್ಲಿ ಬದನೆಯನ್ನು ಒಂದು ಗಂಟೆ ಮುಳುಗಿಸಿಡಲಾಯಿತು.
ಈ ಪರಿಸರ ಸ್ನೇಹಿ ಕ್ರಿಯೆಗೆ ಒಳಪಟ್ಟ ಬದನೆ 12 ದಿನಗಳ ಕಾಲ ಕೆಡದಂತೆ, ಹಣ್ಣಾಗದಂತೆ ಸ್ಥಿತಪ್ರಜ್ಞವಾಗಿತ್ತು. ಎನ್‌ಐಟಿಕೆ ಸೇರಿದಂತೆ ನಾನಾ ಕಡೆ ಈ ಪ್ರಯೋಗದ ವೈಜ್ಞಾನಿಕ ಪರೀಕ್ಷೆ ನಡೆಸಿ ಯಶಸ್ವಿ ಫಲಿತಾಂಶ ಪಡೆಯಲಾಯಿತು.

ಅಮೆರಿಕದಲ್ಲಿ ಜೂ.17ರಿಂದ 22 ರತನಕ ನಡೆಯಲಿರುವ ’ಜೀನಿಯಸ್ ಒಲಿಂಪಿಯಾಡ್’ ಅಂತಾರಾಷ್ಟ್ರೀಯ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿರುವ ಅಮೋಘ ನಾರಾಯಣ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ನೀಡುವ ಯುವ ವಿಜ್ಞಾನಿ ತರಬೇತಿ ಕಾರ್ಯಕ್ರಮ ‘ಯುವಿಕಾ: 2019’ಕ್ಕೆ ಕೂಡ ಆಯ್ಕೆಯಾಗಿದ್ದಾರೆ.

ಪ್ರಕೃತಿಯ ಜತೆಗೆ ಮೌಲ್ಯಧಾರಿತ ಶಿಕ್ಷಣ ಬಿಜಿಎಸ್ ಸಂಸ್ಥೆ

ಮಂಗಳೂರಿನ ಕಾವೂರು ದೋಟದ ಗುಡ್ಡದಲ್ಲಿರುವ ಬಿಜಿಎಸ್ ವಿದ್ಯಾಗಿರಿಯ ಕ್ಯಾಂಪಸ್ ವಿಸ್ತೀರ್ಣ ಭರ್ತಿ 8 ಎಕರೆ. ಅದರಲ್ಲೂ ಪರಿಸರ ಪೂರಕವಾದ ವಾತಾವರಣ ಅತ್ಯಾಧುನಿಕ ವ್ಯವಸ್ಥೆವುಳ್ಳ ಬಿಜಿಎಸ್ ಪಿಯು ಕಾಲೇಜ್ ಹಾಗೂ ಪ್ರಥಮದರ್ಜೆ ಕಾಲೇಜನ್ನು ಹೊಂದಿದೆ.

ಪಿಯು ವಿಭಾಗದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ತೆರೆದಿದ್ದು, ಪಿಸಿಎಂಬಿ, ಪಿಸಿಎಂಸಿ ಹಾಗೂ ಪಿಸಿಎಂಎಸ್, ಹಾಗೂ ವಾಣಿಜ್ಯ ವಿಭಾಗದಲ್ಲಿ ಇಬಿಈಸ್, ಇಬಿಎಸಿ ತರಗತಿಗಳು ಅನುಭವಿ ಉಪನ್ಯಾಸಕರಿಂದ ನಡೆಯುತ್ತಿದೆ.

ಇದರೊಂದಿಗೆ ಸಿಇಟಿ, ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿಯನ್ನು ನೀಡಲು ಸ್ಫೂರ್ತಿ ಟ್ಯುಟೋರಿಯಲ್ ಕೂಳೂರು ಅವರ ಒಡಂಬಡಿಕೆಯೊಂದಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ಪಿಯುಸಿ ಹಾಗೂ ಪದವಿ ಹಂತದಲ್ಲಿ ಸಿಎ, ಸಿಪಿಟಿ ಕೋಚಿಂಗ್ ತರಬೇತಿಗಳನ್ನು ನಡೆಸಲಾಗುತ್ತದೆ.

ಕುಡ್ಲದ ಬ್ಯೂಟೆಸ್ಟ್ ಬೀಚ್ ತಣ್ಣೀರು ಬಾವಿ ಯಾಕೆ ?

ಮಂಗಳೂರಿನ ಎಲ್ಲ ಬೀಚ್‌ಗಳು ಸುಂದರ ಎನ್ನುವ ಮಾತಿನಿಂದ ಆರಂಭಿಸುವುದಾದರೆ ತಣ್ಣೀರು ಬಾವಿ ಬೀಚ್ ಎಲ್ಲಕ್ಕಿಂತ ಹೆಚ್ಚು ಸುಂದರ ಎನ್ನುವುದು ಲೋಕಲ್ ಜತೆಗೆ ವಿದೇಶಿ ಪ್ರವಾಸಿಗರ ಮಾತು.
ಇಲ್ಲಿನ ಸೌಂದರ್ಯತೆಗೆ ಬಹುಮುಖ್ಯವಾದ ಕಾರಣಕ್ಕೆ ನಿರ್ದಿಷ್ಟವಾದ ಉತ್ತರ ಇಲ್ಲದೇ ಹೋದರೂ ಪ್ರೇಮಿಗಳಿಂದ ಹಿಡಿದು ಕುಟುಂಬ ವರ್ಗಕ್ಕೂ ಈ ಬೀಚ್ ಇಷ್ಟವಾಗುವಂತಿದೆ.
ತಣ್ಣನೆಯ ಗಾಳಿ ಅಲೆಗಳ ಅಬ್ಬರದೊಳಗೆ ಮುಳುಗುವ ಸೂರ್ಯನ ಬಿಂಬವನ್ನು ಕಾಣಬೇಕಾದರೆ ತಣ್ಣೀರು ಬಾವಿ ಬೀಚ್‌ಗೆ ಭೇಟಿ ನೀಡಿ. ವಿಶೇಷವಾಗಿ ಬಸ್‌ಗಳ ಸೌಕರ್ಯ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದೇ ಹೋದರೂ ಕೂಡ ಸುಲ್ತಾನ್ ಬತ್ತೇರಿಯ ಮೂಲಕ ಪ್ರಯಾಣಿಕರ ಹಡಗಿನ ಮೂಲಕ ಹೋಗಬಹುದು. ಸ್ವಂತ ವಾಹನ ಇದ್ದರೆ ಕೂಳೂರು ಕಡೆಯಿಂದ ತಣ್ಣೀರು ಬಾವಿ ಬೀಚ್‌ಗೆ ಪ್ರಯಾಣ ಬೆಳೆಸಬಹುದು.

ಮಂಗಳೂರು ಸರ್ಫಿಂಗ್ ಉತ್ಸವ ಈ ಬಾರಿ ಡೌಟ್

ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಬಜೆಟ್‍ನಲ್ಲೇ ಘೊಷಣೆಯಾಗಿದ್ದ `ಮಂಗಳೂರು ಸರ್ಫಿಂಗ್ ಉತ್ಸವ’ಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಇದುವರೆಗೆ ಯಾವುದೇ ಸ್ಪಂದನೆ ಸಿಗದ ಕಾರಣ ಸತತ ಎರಡನೇ ವರ್ಷ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ವರ್ಷ ನಿಂತು ಹೋಗಿದ್ದ ಮಂಗಳೂರು ಸರ್ಫಿಂಗ್ ಉತ್ಸವವನ್ನು ಈ ಬಾರಿ ಲೋಕಸಭೆ ಚುನಾವಣೆ ಇದ್ದರೂ ನಡೆಸಲು ಜಿಲ್ಲಾಡಳಿತ ತಯಾರಿ ನಡೆಸಿತ್ತು. ಆದರೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಸರ್ಫಿಂಗ್ ಉತ್ಸವ ನಡೆಸಲು ಆಸಕ್ತಿ ವಹಿಸದ ಕಾರಣ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡುವ ಅವಕಾಶದಿಂದ ಮಂಗಳೂರು ವಂಚಿತವಾಗಿದೆ.

ಮಂಗಳೂರು ಹೊರವಲಯದ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಸರ್ಫಿಂಗ್ ಉತ್ಸವ ನಡೆಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲಾಡಳಿತ ಮೂಲಕ ಕಳೆದ ಜನವರಿಯಲ್ಲೇ ಪ್ರಸ್ತಾವನೆ ಕಳುಹಿಸಲಾಗಿತ್ತು. ಇದಕ್ಕೆ ಬೇಕಾಗುವ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ಆದರೆ ರಾಜ್ಯ ಸರಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಜಿಲ್ಲಾಡಳಿತಕ್ಕೆ ಬಂದಿಲ್ಲ.

ಕುಡ್ಲದ ರಿಕ್ಷಾ ಚಾಲಕರ ಸಿಟಿ ಇನ್ಪೋ ಟ್ಯಾಬ್ !

ಕುಡ್ಲದ ರಿಕ್ಷಾ ಚಾಲಕರು ಡಿಜಿಟಲ್ ವಿಚಾರದಲ್ಲೂ ಸಾಕಷ್ಟು ಸ್ಮಾರ್ಟ್ ಆಗಿರುವುದು ಗೊತ್ತಿರುವ ವಿಚಾರ. ಈ ಹಿಂದೆ ರಿಕ್ಷಾಗಳಿಗೆ ಪೇಟಿಎಂ ಮಾಡುವ ಮೂಲಕ ಮಾದರಿಯಾದ ಕುಡ್ಲದ ರಿಕ್ಷಾ ಚಾಲಕರು ಟ್ಯಾಬ್ ಅಳವಡಿಸುವ ಕೆಲಸದಿಂದಲ್ಲೂ ದೇಶದಲ್ಲಿ ಮೊದಲ ಟ್ಯಾಬ್ ಅಳವಡಿಸಿದ ಕೆಲಸಕ್ಕೆ ಭಾಜನರಾಗಿದ್ದಾರೆ. ಕುಡ್ಲದ ಕೆಲವು ರಿಕ್ಷಾಗಳು ಈಗಾಗಲೇ ಟ್ಯಾಬ್ ಆಳವಡಿಸಿಕೊಂಡಿದ್ದಾರೆ.
ರಿಕ್ಷಾದಲ್ಲಿ ಅಳವಡಿಸಿಕೊಂಡಿರುವ ಟ್ಯಾಬ್‌ನಲ್ಲಿ ಕರಾವಳಿಯ ದೇವಸ್ಥಾನ, ಮಸೀದಿ, ಚರ್ಚ್, ಹೋಟೆಲ್‌ಗಳ ವಿವರ, ಮಾಲ್, ಪ್ರವಾಸಿ ತಾಣಗಳು ಸೇರಿದಂತೆ ಸಂಪೂರ್ಣ ಮಾಹಿತಿಗಳು ಸಿಗಲಿದೆ. ದೇವಸ್ಥಾನ ಕ್ಲಿಕ್ ಮಾಡಿದಾಕ್ಷಣ ದೇವಸ್ಥಾನದ ಇತಿಹಾಸ, ಪ್ರಯಾಣದ ವಿವರ, ತಂಗಲು ಇರುವ ವ್ಯವಸ್ಥೆ, ಪೂಜಾ ಸಮಯದ ಟೈಮ್ ಟೇಬಲ್ ಇತ್ಯಾದಿಗಳನ್ನು ನೀಡಲಾಗಿದೆ.