ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ನಾನಾ ಹೆಸರುಗಳಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬ. ಕರಾವಳಿಯ ಗ್ರಾಮೀಣ ಭಾಗದ ಶಾಲೆಯ ಆರ್ಥಿಕತೆಗೆ ಮುನ್ನುಡಿ ಬರೆಯಲು ಸಾಧ್ಯವಾಗಿದೆ. ಸಂಕ್ರಾಂತಿ ಹಬ್ಬದ ದಿನವೇ ಸರಕಾರಿ ಶಾಲೆಯಲ್ಲಿ ಜೋಳದ ರೊಟ್ಟಿ ಮಾಡುವ ಮೂಲಕ ಅಡುಗೆ ಸಿಬ್ಬಂದಿಗಳ ವೇತನದ ಜತೆಗೆ ಶಾಲೆಯನ್ನು ಬಲಪಡಿಸುವ ಕಾರ್ಯವಾಗುತ್ತಿದೆ.
ಹೌದು. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ `ಕಟ್ಟತ್ತಿಲ’ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆರ್ಥಿಕ ಬಲಕ್ಕಾಗಿ ಜೋಳದ ರೊಟ್ಟಿಯನ್ನು ನೆಚ್ಚಿಕೊಂಡಿದ್ದಾರೆ. ಇದಕ್ಕೆ ಸಾಥ್ ಕೊಟ್ಟವರು ಕರಸೇವಾ ಟ್ರಸ್ಟ್ ಎನ್ನುವ ವೈದ್ಯ ವಿದ್ಯಾರ್ಥಿಗಳು. ಸಂಕ್ರಾಂತಿ ಹಬ್ಬದಂದು ಈ ಜೋಳದ ರೊಟ್ಟಿ ಯೋಜನೆಗೆ ಚಾಲನೆ ನೀಡುವ ಕಾರ್ಯವಾಗಿದೆ.
ಸಾಲೆತ್ತೂರಿನಿಂದ ಐದಾರು ಕಿಮೀ ದೂರದಲ್ಲಿರುವ ಕಟ್ಟತ್ತಿಲ್ಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಹಳಷ್ಟು ಹಳ್ಳಗಾಡಿನಲ್ಲಿರುವ ಶಾಲೆ. ವಿಶೇಷವಾಗಿ ಮಕ್ಕಳ ಕೊರತೆ, ಮೂಲಭೂತ ಸವಲತ್ತುಗಳ ಸಮಸ್ಯೆಯಿಂದಾಗಿ ಶಾಲೆ ಬಹಳಷ್ಟು ಸಂಕಷ್ಟಕ್ಕೆ ಬಿದ್ದಿತ್ತು. 2016ರ ಹೊತ್ತಿನಲ್ಲಿ 17 ಮಕ್ಕಳು ಇದ್ದ ಶಾಲೆ ನಂತರದ ದಿನಗಳಲ್ಲಿ 35ಕ್ಕೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ವಿಶೇಷವಾಗಿ ಕರ ಸೇವಾ ಟ್ರಸ್ಟ್ ಎನ್ನುವ ವೈದ್ಯ ವಿದ್ಯಾರ್ಥಿಗಳ ಎನ್‍ಜಿಒ ಸಂಸ್ಥೆ ಈ ಶಾಲೆಯನ್ನು ನೆಚ್ಚಿಕೊಂಡ ಬಳಿಕದಿಂದ ಶಾಲೆ ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕಿದೆ.
ಕರ ಸೇವಾ ಟ್ರಸ್ಟ್ ಎನ್ನುವುದು ಮಂಗಳೂರಿನ ದೇರಳಕಟ್ಟೆಯಲ್ಲಿರುವ ಯೆನೆಪೆÇೀಯ ಮೆಡಿಕಲ್ ಕಾಲೇಜಿನಲ್ಲಿ ಕಲಿಯುವ ಎಂಟು ಮಂದಿ ವಿದ್ಯಾರ್ಥಿಗಳ ತಂಡದ ಸಂಸ್ಥೆ. ಇದರ ಅಧ್ಯಕ್ಷ ಡಾ. ಅನುಮೋಲ್ ಹೇಳುವಂತೆ ಆರಂಭದಲ್ಲಿ ಶಾಲೆಯಲ್ಲಿ ಯಾವುದೇ ಸವಲತ್ತು ಇರಲಿಲ್ಲ. ನಾವು ಶುಕ್ರವಾರ ಮಧ್ಯಾಹ್ನದ ಬಳಿಕ ಶಾಲೆಯ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಸೇರಿದಂತೆ ಇತರ ಕೆಲಸಗಳಿಗೆ ಹೋಗುತ್ತಿದ್ದೇವು ದಾನಿಗಳ ನೆರವಿನಿಂದ ಬಾವಿ, ಶಾಲೆಗೆ ಬಣ್ಣ ಕೊಡುವ ಜತೆಯಲ್ಲಿ ಇತರ ಕೆಲಸಗಳನ್ನು ಮಾಡುತ್ತಾ ಬಂದೇವು ಆದರೆ ಪ್ರತಿ ಬಾರಿಯೂ ದಾನಿಗಳಲ್ಲಿ ನೆರವು ಬೇಡುವ ಕೆಲಸ ಕಷ್ಟವಾಗುತ್ತಿತ್ತು. ಇದಕ್ಕಾಗಿ ರಾಜ್ಯದ ಪ್ರತಿಷ್ಠಿತ ಗಣ್ಯರಿಗೆ ಹಾಗೂ ದಾನಿಗಳ ಇಮೇಲ್ ತೆಗೆದುಕೊಂಡು ಅವರಿಗೆ ಮೇಲ್ ಕಳುಹಿಸಲಾಯಿತು. ಆದರೆ ಸೆಲ್ಕೋ ಸಂಸ್ಥೆಯ ಹರೀಶ್ ಹಂದೆ ಇದಕ್ಕೆ ಪ್ರತಿಸ್ಪಂಧಿಸಿದರು ಎನ್ನುತ್ತಾರೆ ಅವರು.
ಹೀಗೆ ಅವರಿಂದ ರಿಪ್ಲೈ ಬಂದ ಬಳಿಕ ಅವರ ತಂಡ ಈ ಶಾಲೆಗೆ ಬಂದು ಪರಿಶೀಲನೆ ಮಾಡಿತು. ಸುತ್ತಮುತ್ತಲಿನ ಜನರನ್ನು ಮಾತನಾಡಿಸಿಕೊಂಡು ಏನೂ ಮಾಡಿದರೆ ಉತ್ತಮ ಎನ್ನುವ ವಿಚಾರವನ್ನು ತಿಳಿದುಕೊಂಡಿತು. ಈ ಬಳಿಕ ಸಂಸ್ಥೆ ಜೋಳದ ರೊಟ್ಟಿ ತಯಾರಿಸಿದರೆ ಒಳ್ಳೆಯ ಆದಾಯ ವೃದ್ಧಿಯಾಗಬಹುದು ಎನ್ನುವುದನ್ನು ಅರಿತು ನಮ್ಮನ್ನು ಸಂಪರ್ಕ ಮಾಡಿತು. ಕರಾವಳಿಯಲ್ಲಿ ಜೋಳದ ರೊಟ್ಟಿ ತಿನ್ನುವವರು ಕಡಿಮೆ ಅದಕ್ಕಾಗಿ ಯೆನೆಪೆÇೀಯ ಆಸ್ಪತ್ರೆಗೆ ದಿನನಿತ್ಯನೂ ಉತ್ತರ ಕರ್ನಾಟಕ ಭಾಗದಿಂದ ರೋಗಿಗಳು ಬರುತ್ತಾರೆ. ಅವರ ಜತೆಯಲ್ಲಿ ಯಾರಾದರೂ ಬಂದೇ ಬರುತ್ತಾರೆ. ಇದಕ್ಕಾಗಿ ಯೆನೆಪೆÇೀಯ ವಿವಿಯ ಕ್ಯಾಂಟೀನ್‍ಗೆ ಈ ಜೋಳದ ರೊಟ್ಟಿಯನ್ನು ನೀಡಿದರೆ ಶಾಲೆಗೂ, ಅಡುಗೆ ಕೆಲಸದವರಿಗೂ ಲಾಭವಾಗುತ್ತದೆ ಎನ್ನುವ ದೃಷ್ಟಿಯಿಂದ ಜೋಳದ ರೊಟ್ಟಿ ಮಾಡುವ ಯೋಜನೆಗೆ ಸಂಕ್ರಾಂತಿಯಂದು ಚಾಲನೆ ನೀಡಲಾಯಿತು ಎನ್ನುವುದು ಡಾ. ಅನ್‍ಮೋಲ್ ಮಾತು. ಜೋಳದ ರೊಟ್ಟಿಯ ಯಂತ್ರಕ್ಕೆ ಕರಾ ಸೇವಾ ಟ್ರಸ್ಟ್‍ನಿಂದ 32 ಸಾವಿ ರೂ. ಖರ್ಚು ಮಾಡಲಾಗಿದೆ. ಸೆಲ್ಕೋ ಅವರು ಸೋಲಾರ್ ಯಂತ್ರವನ್ನು ಅದಕ್ಕೆ ನೀಡುವ ಮೂಲಕ 32 ಸಾವಿರ ರೂ. ಖರ್ಚು ಮಾಡಿದ್ದಾರೆ. ಒಟ್ಟು 64 ಸಾವಿರ ರೂ. ಖರ್ಚುಮಾಡಲಾಗಿದೆ. ಉಳಿದಂತೆ ಸೋಲಾರ್ ಲೈಟ್‍ಗಳನ್ನು ಶಾಲೆಗೆ ಹಾಕಲಾಗಿದೆ ಎನ್ನುತ್ತಾರೆ ಅವರು.
ಕಟ್ಟತ್ತಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಚಿತ್ರಕಲಾ ಅವರು ಹೇಳುವಂತೆ ಈಗ 1ರಿಂದ 5ರ ವರೆಗೆ ತರಗತಿ ಇದೆ. ಮುಂದೆ ಹೆಚ್ಚುವರಿ ತರಗತಿಗೆ ಮನವಿ ಮಾಡಲಾಗಿದೆ. ಇರುವ ಅಡುಗೆ ಮನೆಯಲ್ಲಿಯೇ ಜೋಳದ ರೊಟ್ಟಿ ಮಾಡುವ ಯಂತ್ರವನ್ನು ಇಡಲಾಗಿದೆ. ಅಡುಗೆ ಸಿಬ್ಬಂದಿಯೊಬ್ಬರು ಮಕ್ಕಳಿಗೆ ಊಟ ನೀಡಿದ ಬಳಿಕ ಈ ಜೋಳದ ರೊಟ್ಟಿಯ ಕೆಲಸ ಮಾಡುತ್ತಾರೆ. ಅವರಿಗೆ ಮತ್ತೊಬ್ಬ ಮಹಿಳೆ ಸಾಥ್ ಕೊಡಲಿದ್ದಾರೆ. ಈಗಾಗಲೇ ರೊಟ್ಟಿಯನ್ನು ಮಾಡಿಕೊಂಡು ಯೆನೆಪೆÇೀಯ ಕ್ಯಾಂಟೀನ್‍ಗೆ ನೀಡುವ ಕೆಲಸ ಮಾಡಲಿದ್ದೇವೆ. ಈ ಮೂಲಕ ಶಾಲೆ ಆರ್ಥಿಕವಾಗಿ ಬಲಗೊಳ್ಳುವ ಜತೆಗೆ ಅಡುಗೆ ಸಿಬ್ಬಂದಿಗೂ ಕೊಂಚ ಆದಾಯವಾಗುತ್ತದೆ. ಶಾಲೆಯ ಮಕ್ಕಳಿಗೆ ವ್ಯಾನ್ ಮಾಡಿಸಿದ್ದೇವೆ ಜತೆಗೆ ಅನ್‍ಲೈನ್ ಇಂಗ್ಲೀಷ್ ಕೋಚಿಂಗ್ ಕೂಡ ನೀಡಲಾಗುತ್ತಿದೆ ಇದರ ಜತೆಯಲ್ಲಿ ಯೂನಿಫಾರ್ಮ್ ಕೂಡ ಮಕ್ಕಳಿಗೆ ನೀಡಿದ್ದೇವೆ ಎನ್ನುತ್ತಾರೆ ಅವರು. ಒಟ್ಟಾರೆ ಸರಕಾರಿ ಶಾಲೆಯೊಂದನ್ನು ಬಲಗೊಳಿಸಲು ಶಾಲೆಯ ಶಿಕ್ಷಕರ ಜತೆಗೆ ಯುವಜನತೆಯ ಕೆಲಸವಂತೂ ಶ್ಲಾಘನೀಯ.