ತರಕಾರಿಯೊಂದನ್ನು ನಾಲ್ಕೈದು ದಿನಕ್ಕಿಂತ ಹೆಚ್ಚು ಕಾಲ ಕೆಡದಂತೆ ಸಂರಕ್ಷಿಸುವುದು ಕಷ್ಟ ಆದರೆ ಪುತ್ತೂರಿನ 15 ರ ಹರೆಯದ ಅಮೋಘ ನಾರಾಯಣ ವೆಜಿಟೇಬಲ್ ಕೋಟಿಂಗ್‌ಗೆ ನೈಸರ್ಗಿಕ ವಿಧಾನದ ಯಶಸ್ವಿ ಪ್ರಯೋಗ ಮಾಡಿದ್ದು, ಅದಕ್ಕೀಗ ಪೇಟೆಂಟ್ ಪಡೆಯಲು ನಿರ್ಧರಿಸಿದ್ದಾರೆ. ಮೂಡುಬಿದಿರೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.
ಅಮೋಘ ಬದನೆ ಕಾಯಿಗೆ ಬೀಂಪುಳಿ ಎಂಬ ಮರದ ಎಲೆಯನ್ನು (ಬಿಲಿಂಬಿ ಲೀವ್ಸ್) ಬಳಸಿಕೊಂಡು ಅದರ ನಿರ್ದಿಷ್ಟ ಅಂಶವನ್ನು ಪಡೆದುಕೊಂಡು ತಯಾರಿಸಿದ ದ್ರಾವಣದಲ್ಲಿ ಬದನೆಯನ್ನು ಒಂದು ಗಂಟೆ ಮುಳುಗಿಸಿಡಲಾಯಿತು.
ಈ ಪರಿಸರ ಸ್ನೇಹಿ ಕ್ರಿಯೆಗೆ ಒಳಪಟ್ಟ ಬದನೆ 12 ದಿನಗಳ ಕಾಲ ಕೆಡದಂತೆ, ಹಣ್ಣಾಗದಂತೆ ಸ್ಥಿತಪ್ರಜ್ಞವಾಗಿತ್ತು. ಎನ್‌ಐಟಿಕೆ ಸೇರಿದಂತೆ ನಾನಾ ಕಡೆ ಈ ಪ್ರಯೋಗದ ವೈಜ್ಞಾನಿಕ ಪರೀಕ್ಷೆ ನಡೆಸಿ ಯಶಸ್ವಿ ಫಲಿತಾಂಶ ಪಡೆಯಲಾಯಿತು.
ಅಮೆರಿಕದಲ್ಲಿ ಜೂ.17ರಿಂದ 22 ರತನಕ ನಡೆಯಲಿರುವ ’ಜೀನಿಯಸ್ ಒಲಿಂಪಿಯಾಡ್’ ಅಂತಾರಾಷ್ಟ್ರೀಯ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿರುವ ಅಮೋಘ ನಾರಾಯಣ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ನೀಡುವ ಯುವ ವಿಜ್ಞಾನಿ ತರಬೇತಿ ಕಾರ್ಯಕ್ರಮ ‘ಯುವಿಕಾ: 2019’ಕ್ಕೆ ಕೂಡ ಆಯ್ಕೆಯಾಗಿದ್ದಾರೆ.