ಮಂಗಳೂರಿನ ಬೋಳಾರ ಮಹತೋಭಾರ ಶ್ರೀಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವದ ಮಂಗಳಾದೇವಿಯ ಉತ್ಸವ ಮೂರ್ತಿಯ ಶೋಭಾಯಾತ್ರೆಯನ್ನು ಕಣ್ಣಾರೆ ನೋಡುವ ಭಾಗ್ಯವೇ ಒಂದು ವಿಶಿಷ್ಟ. ನವರಾತ್ರಿ ಸಮಯದಲ್ಲಿ ಇಲ್ಲಿ ನಡೆಯುವ ರಥೋತ್ಸವವಂತೂ ಕರಾವಳಿಯ ದೇವಳಗಳಲ್ಲಿ ಸಿಗುವುದೇ ಅಪರೂಪ. ಅಂದಹಾಗೆ ಮಂಗಳೂರು ಹೆಸರಿನ ಹಿಂದಿನ ಶಕ್ತಿಯೇ ಮಂಗಳಾದೇವಿ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ.
Tagged: karnataka
ಮಾರ್ನೆಮಿಯ ಕುಡ್ಲದ ಪಿಲಿವೇಶ
ನವರಾತ್ರಿ, ಮಹಾನವಮಿ ಎಂದರೆ ಕರಾವಳಿ ಮಂದಿಗೆ ಥಟ್ಟನೆ ಹುಲಿ ವೇಷದ ನೆನಪು. ನವರಾತ್ರಿ ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ ‘ಡೆರೆಮೆ ಟೆಟ್ಟೆ.. ಡೆರೆಮೆ ಟೆಟ್ಟೆ….’ ತಾರ್ಸೆ(ತಮಟೆ) ಸದ್ದು ಅನುರಣನ. ಥೇಟ್ ಹುಲಿಯಂತೇ ಕಾಣುವ ವೇಷಧಾರಿಗಳಿಂದ ರಸ್ತೆ-ವೃತ್ತಗಳಲ್ಲಿ ವಿಶಿಷ್ಟ ನರ್ತನ.
ಮಂಗಳೂರು ದಸರಾ ವೇಳೆ ರಥಬೀದಿ ವೆಂಕಟರಮಣ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಬೋಳಾರ ಮಂಗಳಾದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಆರಂಭ ಮತ್ತು ದಸರಾ ಮೆರವಣಿಗೆಗೆ ಹುಲಿವೇಷ ಆಚರಣೆ.
ಮಂಗಳೂರಿನಲ್ಲಿ ಹುಲಿವೇಷದ 40ಕ್ಕೂ ಅಧಿಕ ತಂಡಗಳಿದ್ದು, ಒಂದೊಂದು ತಂಡದಲ್ಲಿ 25 ವೇಷಧಾರಿಗಳವರೆಗೂ ಇರುತ್ತಾರೆ. ಶಾರದೆ ಮೆರವಣಿಗೆ ಮುಗಿದ ಬಳಿಕ ತಂಡಗಳಿಗೆ ‘ಮರ್ಯಾದೆ’ ಹೆಸರಿನ ಗೌರವ. ಈ ಬಿರುದು ಪಡೆಯುವುದು ತಂಡಗಳಿಗೆ ಪ್ರತಿಷ್ಠೆ.
ಕರಾವಳಿಯ ಹುಲಿವೇಷ ವಿಶಿಷ್ಟ. ತಾರ್ಸೆ, ಡೋಲಿನ ಲಯಕ್ಕೆ ವೇಷಧಾರಿಗಳು ಪ್ರದರ್ಶಿಸುವ ಆಟಗಳ ವರಸೆ ಇತರೆಡೆಗಿಂಥ ಭಿನ್ನ. ಇತ್ತೀಚೆಗೆ ರಾಜ್ಯದ ವಿವಿಧೆಡೆಗೂ ಇಲ್ಲಿನ ಹುಲಿವೇಷ ನರ್ತನಕ್ಕೆ ಬೇಡಿಕೆ ಬರುತ್ತಿದೆ. ಇಲ್ಲಿನ ಹುಲಿವೇಷ ತಂಡವೊಂದು ಫ್ರಾನ್ಸ್‌ಗೂ ತೆರಳಿ ಕರಾವಳಿಯ ಜಾನಪದ ಕಲೆ ಪ್ರದರ್ಶಿಸಿ ಬಂದಿದೆ.
ವೇಷಧಾರಿ ತಾಯಿ ಹುಲಿ ಮರಿಗಳಿಗೆ ಬೇಟೆ ಕಲಿಸುವುದು, ಹಾಲುಣಿಸುವುದು, ಮರಿ ಹುಲಿಗಳ ಆಟ, ವಯಸ್ಸಿಗೆ ಬಂದ ಹುಲಿಗಳ ಕಾದಾಟವನ್ನು ಕುಣಿತದಲ್ಲಿಯೇ ಪ್ರದರ್ಶಿಸುತ್ತಾರೆ. ಪಲ್ಟಿ ಹೊಡೆಯುವುದು, ಮೆಣಸಿನ ಹುಡಿ ಕಲಕಿದ ನೀರಿನಿಂದ ಹಿಮ್ಮುಖವಾಗಿ ನಾಣ್ಯ ತೆಗೆಯವುದು, ಝಂಡಾ ಕಸರತ್ತು, ಬಾಯಿಂದ ಜೀವಂತ ಕುರಿ ಕಚ್ಚಿ ಎಸೆಯುವುದು, ‘ಅಕ್ಕಿ ಮುಡಿ’ ಎತ್ತುವ ಕಸರತ್ತು ಹುಲಿವೇಷದ ಗತ್ತು.
ನವರಾತ್ರಿಗೆ ವೇಷ ಧರಿಸುವುದಾದರೆ ಚೌತಿಗೆ ಅಥವಾ ನವರಾತ್ರಿ ಮೊದಲ ದಿನ ತೆಂಗಿನ ಕಾಯಿ, ಅಕ್ಕಿ, ಬಾಳೆಹಣ್ಣು ಇಟ್ಟು, ಗಣಪತಿ ನೆನೆದು ಸಂಕಲ್ಪ ಮಾಡಬೇಕು. ಅಂದು ತಾರ್ಸೆಯವರಿಂದ ಕುಣಿತದ ಅಭ್ಯಾಸ. ಮಕ್ಕಳಾದರೆ ನುರಿತ ಹುಲಿವೇಷಧಾರಿಗಳ ಬಳಿ ಒಂದೆರಡು ವಾರ ಕುಣಿತ ಕಲಿಯುತ್ತಾರೆ. ವೇಷ ಹಾಕುವವರು ಮಾಂಸಾಹಾರ, ಮದ್ಯ ಸೇವಿಸುವಂತಿಲ್ಲ. ಈ ಸಂಪ್ರದಾಯಕ್ಕೆ ಕರಾವಳಿ ಭಾಗದಲ್ಲಿ ಊದು ಹಾಕುವುದು ಎಂಬ ಹೆಸರು.
ಈ ವೇಷ ಬಣ್ಣದ ಮೂಲಕ ಗಮನ ಸೆಳೆಯುತ್ತದೆ. 10-12 ಮಂದಿ ತಂಡಕ್ಕೆ ಬಣ್ಣ ಹಚ್ಚಬೇಕೆಂದರೆ ಇಡೀ ರಾತ್ರಿ ಕೆಲಸ. ಒಬ್ಬ ವೇಷಧಾರಿಗೆ ಬಣ್ಣ ಬಳಿಯಲು 3 ತಾಸು ಬೇಕಾಗುತ್ತದೆ. ಬಣ್ಣ ಹಾಕಲು ವೇಷಧಾರಿ ಮೈಯ ರೋಮವನ್ನೆಲ್ಲ ತೆಗೆಯಬೇಕು. ಇದಕ್ಕೆಲ್ಲ ನುರಿತವರನ್ನು ಮೊದಲೇ ಬುಕ್ ಮಾಡಿಟ್ಟುಕೊಳ್ಳಬೇಕು. ಹಿಂದೆಲ್ಲ ಸಾಂಪ್ರದಾಯಿಕ ಬಣ್ಣ ಬಳಸುತ್ತಿದ್ದರು. ಬಣ್ಣ ವಾರಗಟ್ಟಲೆ ಉಳಿಯಲು ಮೊಟ್ಟೆಯ ಬಿಳಿ ದ್ರವ ಬಳಸುತ್ತಿದ್ದರು. ಈಗ ರಾಸಾಯನಿಕ ಬಣ್ಣವೇ ಗತಿಯಾಗಿದ್ದು, ಬೇಗನೇ ಕಿತ್ತು ಹೋಗುತ್ತದೆ.
ಕುರಿ ಹೊಡೆಯುವ ಆಚರಣೆ ಅಂದುಕೊಂಡಷ್ಟು ಸುಲಭವಲ್ಲ. ಎರಡು ವಾರ ಗೋಣಿಚೀಲದಲ್ಲಿ ಮರಳು ತುಂಬಿಸಿ ಹಲ್ಲುಕಚ್ಚಿ ಎತ್ತುವ ಅಭ್ಯಾಸ ನಡೆಸಬೇಕು. ಇಲ್ಲದೆ ಹೋದರೆ ಹಲ್ಲು ಕಿತ್ತುಹೋಗುತ್ತದೆ. ಹಲ್ಲು ಮುರಿದುಕೊಂಡವರು, ವೇಷ ತ್ಯಜಿಸಿದವರೂ ಇದ್ದಾರೆ.
ಹುಲಿವೇಷ ಕುಣಿತವನ್ನೂ ಹೆಜ್ಜೆ ಆಧರಿಸಿ ಒಂದು ಪೌಲ, ಎರಡು ಪೌಲ… ಎಂಟು ಪೌಲ.. ಕುಣಿತ ಎಂದು ವಿಂಗಡಿಸಲಾಗುತ್ತದೆ. ಕುಳಿತೇ ಕುಣಿಯುವ ಹಾಗೂ ನಿಂತು ಕುಣಿಯುವ ಆಟಗಳಲ್ಲಿ 20ಕ್ಕೂ ಅಧಿಕ ವರಸೆಗಳಿವೆ.
ಕುಡ್ಲದ ಕಾರ್ನಾಡ್ ಸದಾಶಿವ ರಾವ್ ರಸ್ತೆ ಕತೆ…
ಕಾರ್ನಾಡ್ ಸದಾಶಿವ ರಾವ್ ದಕ್ಷಿಣ ಭಾರತದ ಗಾಂಧಿ ಎಂದು ಪ್ರಸಿದ್ಧಿ ಪಡೆದವರಿವರು. ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಚಾಲನೆ ಕೊಟ್ಟ ದೇಶಪ್ರೇಮಿ. ಮಂಗಳೂರಿನ ಕಾರ್ನಾಡ್ ಎಂಬಲ್ಲಿ 1881ರಲ್ಲಿ ಜನಿಸಿದ ಸದಾಶಿವರಾವ್ ಕಾರ್ನಾಡ್ ಎಂದೇ ಚಿರಪರಿಚಿತರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಕಾರ್ನಾಡರು ಸುಖದ ಸುಪ್ಪತ್ತಿಗೆಯಲ್ಲಿ ಹಾಯಾಗಿ ಕಾಲ ಕಳೆಯಬಹುದಾಗಿತ್ತು.
ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದ ಕರೆಗೆ ಓಗೊಟ್ಟು ಚಳವಳಿಗೆ ಧುಮುಕಿದ ಅವರು, ತಮ್ಮ ಜೀವನದ ಕೊನೆಯವರೆಗೂ ಹೋರಾಟಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟಂತಹ ಮಹಾನುಭಾವ. ಕಾರ್ನಾಡರು ಕೇವಲ ಸ್ವಾತಂತ್ರ್ಯ ಹೋರಾಟಕಷ್ಟೇ ತಮ್ಮ ಬದುಕನ್ನು ಮೀಸಲಾಗಿಟ್ಟಿರಲಿಲ್ಲ. ಹಿಂದುಳಿದ ಜಾತಿಗಳ ಬಗ್ಗೆ, ಮೂಢನಂಬಿಕೆ ವಿರುದ್ಧ, ಸಾಮಾಜಿಕ ಕ್ಷೇತ್ರದಲ್ಲಿನ ಅನಿಷ್ಟ ಪದ್ಧತಿಗಳ ವಿರುದ್ಧ ಸತತವಾಗಿ ಹೋರಾಟ ನಡೆಸಿದ್ದರು. ಪತ್ನಿ ಶಾಂತಾಭಾಯಿ ಕೂಡ ಅವರಿಗೆ ಬೆಂಬಲವಾಗಿ ನಿಂತಿದ್ದರು. ಆಕೆ ಕೂಡ ಮಹಿಳಾ ಸಭಾವನ್ನು ಹುಟ್ಟು ಹಾಕಿ ಬಾಲ ವಿಧವೆಯರಿಗೆ ನೆರವು ನೀಡಿ ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಪಣತೊಟ್ಟಿದ್ದರು.
1936 ರಲ್ಲಿ ಫೈಜಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದಾಗಲೇ ಅವರಿಗೆ ಜ್ವರ ವಿಪರೀತವಾಗಿ ಕಂಗೆಡಿಸಿತ್ತು. ಅಲ್ಲಿಂದ ಮುಂಬಯಿಗೆ ವಾಪಸ್ಸಾದ ಕಾರ್ನಾಡರು 1937 ಜನವರಿ 9 ರಂದು ಸಾವನ್ನಪ್ಪಿದ್ದರು. ತನ್ನ ಇಡೀ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟ ಕಾರ್ನಾಡರು, ತನ್ನೆಲ್ಲಾ ಸಂಪತ್ತನ್ನು ಬಡವರ, ದೀನ, ದಲಿತರ ಏಳಿಗೆಗಾಗಿ ವಿನಿಯೋಗಿಸಿದ್ದರು. ಅವರು ಸಾವನ್ನಪ್ಪಿದಾಗ ಶವಸಂಸ್ಕಾರಕ್ಕೂ ಹಣವಿರಲಿಲ್ಲವಾಗಿತ್ತು.
ಆ ಕಾರಣಕ್ಕಾಗಿಯೇ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಾದಂಬರಿಕಾರ ದಿ.ಡಾ.ಶಿವರಾಮ ಕಾರಂತರು ಕಾರ್ನಾಡರನ್ನು ಧರ್ಮರಾಜ ಅಂತ ಕರೆದಿದ್ದರು. ಅಂದಹಾಗೆ ಅವರ ನೆನಪಿಗಾಗಿ ಕುಡ್ಲದ ಕೆ.ಎಸ್.ರಾವ್ ರಸ್ತೆ ಅವರ ನೆನಪಿಗಾಗಿ ನಾಮಕರಣ ಮಾಡಲಾಗಿದೆ. ಈ ರಸ್ತೆಯಲ್ಲಿ ಬಹಳಷ್ಟು ವ್ಯಾಪಾರ ಕೇಂದ್ರಗಳು, ಬ್ಯಾಂಕ್‌ಗಳು ಕಾರ‍್ಯಾಚರಿಸುತ್ತಿದೆ.
pics: Nandan Bhat
ಚಾರ್ಮಾಡಿಯಲ್ಲಿ ಒಂದು ತಿಂಗಳು ಹೋಗಲೇ ಬೇಡಿ ಮಾರಾಯ್ರೆ
ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ಸೆಕ್ಷನ್‌ನಲ್ಲಿ ಅಪಾರ ಮಳೆಯಿಂದಾಗಿ ಗುಡ್ಡ ಕುಸಿತಗೊಂಡು ಸಂಚಾರ ಪೂರ್ಣವಾಗಿ ಒಂದು ತಿಂಗಳ ಕಾಲ ಎಲ್ಲ ವಾಹನಗಳ ಸಂಚಾರವನ್ನು ಸ್ಥಗಿತ ಮಾಡಲಾಗಿದೆ. ಆ.14 ರಂದು ಮಧ್ಯ ರಾತ್ರಿ 12ಗಂಟೆಯಿಂದ ಸೆಪ್ಟೆಂಬರ್ 14ರ ಮಧ್ಯ ರಾತ್ರಿ 12 ವರೆಗೆ ಸಂಚಾರ ಸ್ಥಗಿತಗೊಂಡಿದೆ.
ಇದರ ಬದಲು ಉಜಿರೆ- ಧರ್ಮಸ್ಥಳ- ಕೊಕ್ಕಡ-ಗುಂಡ್ಯ- ಶಿರಾಡಿ ಮೂಲಕ ಸಂಚಾರ ಮಾಡಬೇಕು. ಮೂಡಿಗೆರೆ ಹ್ಯಾಂಡ್ ಪೋಸ್ಟ್ ಜನ್ನಾಪುರ- ಆನೆಮಹಲ್- ಶಿರಾಡಿ- ಗುಂಡ್ಯ ಮೂಲಕ ಸಂಚರಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ.
ಕುಡುಪು, ಕುಕ್ಕೆ, ಮಂಜೇಶ್ವರ ದೇವಳದಲ್ಲಿ ನಾಗರ ಪಂಚಮಿಗೆ ಯಾಕೆ ವಿಶೇಷ?
ಮಂಗಳೂರಿನ ಕುಡುಪು ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇದರ ಜತೆಯಲ್ಲಿ ಮಂಜೇಶ್ವರದ ಅನಂತೇಶ್ವರ ದೇವಸ್ಥಾನ ಮೂರು ದೇವಳದಲ್ಲಿ ನಾಗರ ಪಂಚಮಿ ಎಂದಾಕ್ಷಣ ಬಹಳಷ್ಟು ವಿಶೇಷತೆಗಳಿರುತ್ತದೆ. ಈ ಮೂರು ದೇವಳಗಳು ಕೂಡ ನಾಗನಿಗೆ ವಿಶಿಷ್ಟವಾದ ಸ್ಥಾನಮಾನವಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಎಂಬ ಗ್ರಾಮದಲ್ಲಿ ಈ ಪ್ರಸಿದ್ಧ ದೇವಾಲಯ ನೆಲೆಸಿದೆ. ಸರ್ಪ ದೋಷ ನಿವಾರಣೆಗಾಗಿ ಈ ದೇವಾಲಯ ದೇಶದಲ್ಲೆ ಪ್ರಖ್ಯಾತವಾಗಿದೆ. ದೇಶದ ನಾನಾ ಮೂಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸರ್ಪ ದೋಷದಿಂದ ಮುಕ್ತಿ ಪಡೆಯಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಸರ್ಪಗಳ ದೇವರಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಮುಖ್ಯ ದೇವತೆಯಾಗಿ ಪೂಜಿಸಲಾಗುತ್ತದೆ. ಸರ್ಪ ದೇವತೆಗಳಾದ ವಾಸುಕಿ ಮತ್ತು ಶೇಷ ನಾಗ ಪ್ರಮುಖ.
ಕುಡುಪು ಶ್ರೀ ಅನಂತ ಪದ್ಮನಾಭ ದೇವಳ ಸರ್ಪ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಈ ದೇವಸ್ಥಾನವು ಕರಾವಳಿಯ ಪ್ರಮುಖ ನಾಗ ಕ್ಷೇತ್ರಗಳಲ್ಲಿ ಒಂದಾಗಿದೆ. ನಾಗರ ಪಂಚಮಿಯಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸೇವೆಗಳೆಲ್ಲವನ್ನೂ ಮಂಜೇಶ್ವರ ಶ್ರಿಮದ್ ಅನಂತೇಶ್ವರ ದೇವಸ್ಥಾನದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ವಿಷ್ಣು, ಈಶ್ವರ ಹಾಗೂ ನಾಗ ದೇವರ ಸಾನಿಧ್ಯವಿದೆ. ನಾಗರ ಪಂಚಮಿ ಹಾಗೂ ಷಷ್ಠಿ ಮಹೋತ್ಸವ ಇಲ್ಲಿನ ಪ್ರಧಾನ ಆಚರಣೆಗಳು.